ಕಾರವಾರ: ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ದೋಣಿ ವಿಹಾರ ಮಾಡುತ್ತಿದ್ದ ವೇಳೆ ದೋಣಿಯ ಎಂಜಿನ್ ಕೆಟ್ಟು ದೊಡ್ಡ ಅಲೆಯೊಂದಕ್ಕೆ ದೋಣಿ ಮಗುಚಿಬಿದ್ದ ಘಟನೆ ಘಟನೆ ಶುಕ್ರವಾರ ಸಂಜೆ ನಡೆದಿದೆ. ದೋಣಿಯಲ್ಲಿದ್ದ ನಾಲ್ವರು ಪ್ರವಾಸಿಗರು ಅದೃಷ್ಟವಶಾತ್ ಪಾರಾಗಿದ್ದಾರೆ.
ಶಾಲಾ ಕಾಲೇಜುಗಳಿಗೆ ರಜೆ ಹಿನ್ನೆಲೆಯಲ್ಲಿ ಕಡಲ ತೀರಗಳಿಗೆ ಪ್ರವಾಸಿಗರ ಭೇಟಿ ಹೆಚ್ಚಾಗಿದೆ. ಕಾರವಾರದ ಟ್ಯಾಗೋರ್ ಕಡಲ ತೀರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಪ್ರವಾಸಿಗರು ದೋಣಿ ವಿಹಾರ ಮಾಡಲು ಮುಂದಾಗಿದ್ದಾರೆ. ದೋಣಿ ವಿಹಾರ ನಡೆಸಿ ದಡಕ್ಕೆ ವಾಪಾಸ್ ಆಗುವ ವೇಳೆಯಲ್ಲಿ ದೋಣಿಯ ಎಂಜಿನ್ ಕೆಟ್ಟಿದೆ. ದೋಣಿಯ ಚಾಲಕ ಎಂಜಿನ್ ಸ್ಟಾರ್ಟ್ ಮಾಡಲು ಯತ್ನಿಸಿದ್ದು ಫಲ ಕೊಡಲಿಲ್ಲ. ಎದೆಯೆತ್ತರದವೆರೆಗಿನ ನೀರಿನಲ್ಲಿ ದೋಣಿ ಇದ್ದ ಕಾರಣ ಚಾಲಕ ನೀರಿಗಿಳಿದು ತಳ್ಳಲು ಪ್ರಯತ್ನಿಸಿದ್ದಾನೆ.
ಈ ವೇಳೆ ಸಂಜೆಯಾಗಿದ್ದ ಕಾರಣ ದೊಡ್ಡ ಅಲೆಯೊಂದು ಅಪ್ಪಳಿಸಿ ದೋಣಿ ಮಗುಚಿ ಬಿದ್ದಿದೆ. ಬಳಿಕ ತಕ್ಷಣ ಮಗುಚಿದ ದೋಣಿಯನ್ನು ಚಾಲಕ ಸರಿಪಡಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಕೊನೆಗೆ ದಡದಲ್ಲಿದ್ದವರು ರಕ್ಷಣೆಗೆ ದಾವಿಸಿದರು. ದೋಣಿ ಸರಿಪಡಿಸಿ ಕೊಚ್ಚಿ ಹೋಗುವ ಸ್ಥಿತಿಯಲ್ಲಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ದೋಣಿಯಲ್ಲಿದ್ದ ನಾಲ್ವರು ಪ್ರವಾಸಿಗರ ಪೈಕಿ ಯಾರಿಗೂ ಹಾನಿಯಾಗಿಲ್ಲ ಎಂದು ದೋಣಿಯ ಮಾಲೀಕರು ತಿಳಿಸಿದ್ದಾರೆ. ಸದ್ಯ ದೋಣಿ ಮಗುಚಿಬಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಮಧ್ಯಪ್ರದೇಶ: ಮಟಟಿಲಾ ಅಣೆಕಟ್ಟಿನಲ್ಲಿ ದೋಣಿ ಮಗುಚಿ 7 ಜನರು ಸಾವು