ಬಹುಶಃ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಒಂದೇ ಒಂದು ಚಿತ್ರ ಹಾಗೂ ಒಂದೇ ಒಂದು ದೃಶ್ಯದಿಂದ ಖ್ಯಾತಿ-ಕುಖ್ಯಾತಿಗೆ ಒಳಗಾದ ಏಕೈಕ ನಾಯಕ ನಟನೆಂದರೆ ಅದು ಡಾ.ವಿಷ್ಣುವರ್ಧನ್ ಮಾತ್ರ. 1972 ರಲ್ಲಿ ಬಿಡುಗಡೆ ಆದ 'ನಾಗರಹಾವು' ಚಿತ್ರದಿಂದ ಕನ್ನಡದ ಆಂಗ್ರಿ ಯಂಗ್ ಮ್ಯಾನ್ ಯಶಸ್ಸಿನ ಉತ್ತುಂಗ ಶಿಖರಕ್ಕೆ ತಲುಪಿದ್ದರೆ, ಮರು ವರ್ಷವೇ ಬಿಡುಗಡೆ ಆದ 'ಗಂಧದ ಗುಡಿ' ಚಿತ್ರದಿಂದ ವಿವಾದಕ್ಕೆ ಒಳಗಾಗಿದ್ದು ಇತಿಹಾಸ. 'ನಾಗರಹಾವು' ಚಿತ್ರದಲ್ಲಿನ ಅತ್ಯದ್ಭುತ ಅಭಿನಯದ ಪ್ರತಿಫಲವಾಗಿ ಡಾ.ರಾಜ್ ಕುಮಾರ್ ಅವರ 150ನೇ ಚಿತ್ರ 'ಗಂಧದ ಗುಡಿ'ಯಲ್ಲಿ ಅಭಿನಯಿಸುವ ಸೌಭಾಗ್ಯ ಡಾ.ವಿಷ್ಣುವರ್ಧನ್ ಗೆ ಸಿಕ್ತು. ಎಂ.ಪಿ.ಶಂಕರ್ ನಿರ್ಮಾಣದ ಈ ಚಿತ್ರಕ್ಕೆ ಆಯ್ಕೆ ಆದಾಗ ವಿಷ್ಣುವರ್ಧನ್ ಪಟ್ಟ ಸಂತಸ ಅಷ್ಟಿಷ್ಟಲ್ಲ. ಆದ್ರೆ, ವಿಘ್ನ ಸಂತೋಷಿಗಳ ಕುತಂತ್ರದಿಂದಾಗಿ ವಿಷ್ಣುವರ್ಧನ್ ವ್ಯಕ್ತಿತ್ವದ ಮೇಲೆ ಕಪ್ಪು ಚುಕ್ಕೆ ಬರುವಂತಾಯ್ತು. ಇದರಿಂದ ಜೀವನ ಪರ್ಯಂತ ವಿಷ್ಣು ನೋವು ಅನುಭವಿಸಿದ್ದು ಸುಳ್ಳಲ್ಲ.